ಸುಪ್ರಿಂಕೋರ್ಟ್​ನ ಮೊದಲ ಮಹಿಳಾ ನ್ಯಾಯಾಧೀಶೆ ಕೇರಳದ ಜಸ್ಟೀಸ್ ಫಾತಿಮಾ ಬೀವಿ ನಿಧನ

Kerala,Suprime Court,

ಸುಪ್ರಿಂಕೋರ್ಟ್​ನ ಮೊದಲ ಮಹಿಳಾ ನ್ಯಾಯಾಧೀಶೆ ಕೇರಳದ ಜಸ್ಟೀಸ್  ಫಾತಿಮಾ ಬೀವಿ ನಿಧನ...
1 / 1

1. ಸುಪ್ರಿಂಕೋರ್ಟ್​ನ ಮೊದಲ ಮಹಿಳಾ ನ್ಯಾಯಾಧೀಶೆ ಕೇರಳದ ಜಸ್ಟೀಸ್ ಫಾತಿಮಾ ಬೀವಿ ನಿಧನ...

ತಿರುವನಂತಪುರಂ: ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಜಸ್ಟೀಸ್ ಫಾತಿಮಾ ಬೀವಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. 96 ವರ್ಷದ ಫಾತಿಮಾ ಬೀವಿ  ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ, ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇರಳದ ಜಸ್ಟೀಸ್ ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ನ್ಯಾಯದೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ತಮಿಳುನಾಡಿನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ನ್ಯಾಯಾಧೀಶರಾಗಿ ನಿವೃತ್ತರಾದ ನಂತರ, ಜಸ್ಟಿಸ್ ಫಾತಿಮಾ ಬೀವಿ ಅವರು ತಮ್ಮ ತವರು ರಾಜ್ಯವಾದ ಕೇರಳದ ಪಥನಂತಿಟ್ಟದಲ್ಲಿ ನೆಲೆಸಿದ್ದಾರೆ. ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರು ಮಾತ್ರವಲ್ಲ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರೂ ಆಗಿದ್ದರು. ಇದಲ್ಲದೆ, ಅವರು ಮುಸ್ಲಿಂ ಸಮುದಾಯದಿಂದ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ.

ಏಪ್ರಿಲ್ 30, 1927 ರಂದು ಕೇರಳದ ಪಥನಂತಿಟ್ಟದಲ್ಲಿ ಮೀರಾ ಸಾಹಿಬ್ ಮತ್ತು ಖದೀಜಾ ಬಿವ್ ದಂಪತಿಗೆ ಜನಿಸಿದರು. ಪತ್ತನಂತಿಟ್ಟದಲ್ಲೇ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದರು. ಬಿಎಸ್ಸಿ ಮುಗಿಸಿದ್ದು ತಿರುವನಂತಪುರದಲ್ಲಿ. ನಂತರ ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬಿಎಲ್ ಪದವಿ ಪಡೆದ ಬೀವಿ ಅವರು 1950ರಲ್ಲಿ ವಕೀಲರಾಗಿ ಬಾರ್ ಕೌನ್ಸಿಲ್​ನಲ್ಲಿ ಹೆಸರು ನೋಂದಾಯಿಸಿಕೊಂಡರು.

ನ್ಯಾಯಾಂಗದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ನ್ಯಾಯಮೂರ್ತಿ ಫಾತಿಮಾ ಬೀವಿ ಅವರು 1989 ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಅವರು 1992 ರಲ್ಲಿ ನಿವೃತ್ತರಾದರು. ಈ ಹಿಂದೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ನ್ಯಾಯಾಂಗ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.